ವಚನಗಳು
ಅಲ್ಲಮಪ್ರಭು ವಚನಗಳು
ಅಂಗ ಅಂಗನೆಯ
ರೂಪಲ್ಲದೆ,
ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು.
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ !
ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ
ಅಂಗ ಅನಂಗವೆಂಬೆರಡೂ
ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
ಜ್ಞಾನನಷ್ಟ ಶಬ್ದ ನೋಡಾ. ಳ
ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
ಬಿನ್ನವಿಲ್ಲ ನೋಡಾ- ಗುಹೇಶ್ವರ ಸಾಕ್ಷಿಯಾಗಿ
ಅಂಗ ಉಳ್ಳನ್ನಬರ
ಲಿಂಗಪೂಜೆಯ ಬೇಕು.
ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು.
ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು.
ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ.
ಅಂಗ ಮೂವತ್ತಾರರ
ಮೇಲೆ ಲಿಂಗ.
ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ,
ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ
ಸುಸಂಗ ಪ್ರಸಾದವ ಕೊಳಬಲ್ಲವಂಗೆ
ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು
ಅಂಗ ಲಿಂಗದಲ್ಲಿ
ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ
ತರಹರವಾಗಿ ಇರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.
ಅಂಗಕ್ಕೆ ಆಚಾರವಾಗಿ
ಕಳೆಗಳುಳ್ಳನ್ನಕ್ಕ
ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು.
ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ?
ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ.
ಗುಹೇಶ್ವರಲಿಂಗ ಸಾಕ್ಷಿಯಾಗಿ,
ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ.
ಅಂಗಕ್ಕೆಂದಡೆ
ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು.
ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು.
ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ
ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ,
ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ
ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
ಅಂಗಜಂಗುಳಿಗಳೆಲ್ಲಾ
ಅಶನಕ್ಕೆ ನೆರೆದರು.
ಲಿಂಗದ ಹವಣನಿವರೆತ್ತ ಬಲ್ಲರು ?
ಕಾಯಜೀವಿಗಳು ಕಳವಳಧಾರಿಗಳು,
ದೇವರ ಸುದ್ದಿಯನಿವರೆತ್ತ ಬಲ್ಲರು ?
ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು.
ಗುಹೇಶ್ವರನ ನಿಲವನಿವರೆತ್ತ ಬಲ್ಲರು.
ಅಂಗಜೀವಿಗಳೆಲ್ಲಾ
ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
ಮನಬಂದ ಪರಿಯಲ್ಲಿ ನುಡಿವಿರಿ,
ಗುಹೇಶ್ವರಲಿಂಗ ನಿಮಗೆಲ್ಲಿಯದೊ ?
ಅಂಗದ ಕಳೆ
ಲಿಂಗದಲ್ಲಿ ಅರತ ಬಳಿಕ,
ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
ಶಬ್ದಸಂದಣಿಗೆ ಹಂಗಿಲ್ಲ ನೋಡಾ.
ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ.
ಬಸವಣ್ಣನ ವಚನಗಳು
ನಾದಪ್ರಿಯ
ಶಿವನೆಂಬರು ನಾದಪ್ರಿಯ ಶಿವನಲ್ಲ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
ವೇದವನೋದಿದ ಬ್ರಹ್ಮನ ಶಿರಹೋಯ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!
ಉಳ್ಳವರು ಶಿವಾಲಯವ
ಮಾಡುವರು
ನಾನೇನು ಮಾಡಲಿ ಬಡವನಯ್ಯ?
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರವೇ ಹೊನ್ನ ಕಳಸವಯ್ಯ!
ಕೂಡಲಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ!
ಎನ್ನ ಕಾಯವ
ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎ ನ್ನ ನರಗಳ ತಂತಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಉರದಲೊತ್ತಿ ಬಾರಿಸು ಕೂಡಲಸಂಗಮದೇವ!
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು
ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
ವಚನದಲ್ಲಿ ನಾಮಾಮೃತ
ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲ ಸಂಗಮ ದೆವಾ
ನಿಮ್ಮ ಚರಣಕಮಲದೊಳಗಾನು ತುಂಬಿ
ನೀರಿಗೆ ನೈದಿಲೆ ಶೃಂಗಾರ
ಸಮುದ್ರಕೆ ತೆರೆಯೆ ಶೃಂಗಾರ
ನಾರಿಗೆ ಗುಣವೆ ಶೃಂಗಾರ
ಗಗನಕೆ ಚಂದ್ರಮ ಶೃಂಗಾರ
ನಮ್ಮ ಕೂಡಲ ಸಂಗನ ಶರಣರ
ನೊಸಲಿಗೆ ವಿಭೂತಿಯೆ ಶೃಂಗಾರ
ಇವನಾರವ ಇವನಾರವ
ಇವನಾರವನೆಂದು ಎನಿಸದಿರಯ್ಯ.
ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು
ಎನಿಸಯ್ಯ.
ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದು ಎನಿಸಯ್ಯ.
ಸರ್ವಜ್ಙ ನ ವಚನಗಳು
ದೇಶಕ್ಕೆ ಸಜ್ಜನನು | ಹಾಸ್ಯಕ್ಕೆ ಹನುಮಂತ |
ಕೇಶವನು ಭಕ್ತರೊಳಗೆಲ್ಲ ಮೂರು ಕ |
ಣ್ಣೀಶನೇ ದೈವ ಸರ್ವಜ್ಞ
ಉಂಬಳಿಯ ಇದ್ದವನು | ಕಂಬಳಿಯ ಹೊದೆಯುವನೇ ? |
ಶಂಭುವಿರಲ್ಲಿಕ್ಕೆ ಮತ್ತೊಂದು ದೈವವ |
ನಂಬುವನೇ ಹೆಡ್ಡ ಸರ್ವಜ್ಞ
ಅಂಜದಲೆ ಕೊಂಡಿಹರೆ | ನಂಬು ಅಮೃತದಕ್ಕು |
ಅಂಜೆ ಅಳುಕುತಲಿ ಕೊಂಡಿಹರೆ, ಅಮೃತವು |
ನಂಜಿನಂತಕ್ಕು ಸರ್ವಜ್ಞ
ಎಂಜಲೂ ಅಶೌಚ |
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ |
ರಂಜನನ ನೆನಯೂ ಸರ್ವಜ್ಞ
ಅಕ್ಕಮಹಾದೇವಿ ವಚನಗಳು
ಅಂಗವಿಕಾರಸಂಗವ ಮರೆದು, ಲಿಂಗವನೊಡಗೂಡುತಿಪ್ಪವರ ತೋರಾ
ಎನಗೆ. ಕಾಮವಿಕಾರಕತ್ತಲೆಯಳಿದು, ಭಕ್ತಿಪ್ರಾಣವಾಗಿಪ್ಪವರ ತೋರಾ ಎನಗೆ. ತ್ರಿಕರಣ ಶುದ್ಧವಾಗಿ
ನಿಮ್ಮ ನೆರೆ ನಂಬಿದ ಸದ್ಭಕ್ತರ ತೋರಾ ಎನಗೆ ಚೆನ್ನಮಲ್ಲಿಕಾರ್ಜುನಾ.
ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ
ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು
ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ
ಅರಿಯೆನಯ್ಯಾ.
ಅಂಗೈಯೊಳಗಣ ಲಿಂಗವ ಪೂಜಿಸುತ್ತ, ಮಂಗಳಾರತಿಗಳನು
ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ. ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ
ಮೋಹ ತೆರಹಿಲ್ಲದಿರ್ದೆ ನೋಡಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನಗಲದ ಪೂಜೆ
ಅನುವಾಯಿತ್ತೆನಗೆ.
ಅಂದೂ ನೀನೆ, ಇಂದೂ ನೀನೆ, ಏಂದೂ
ನೀನೆ, ಕೇಳಾ ತಂದೆ. ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ ಅಂದೂ ಇಂದೂ
ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ. ಒಂದಲ್ಲದೆ ಎರಡಯೆನಯ್ಯಾ. ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ
ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ
ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು
ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.